ಮೊನ್ನೆ ಮಾರ್ಚ್ ೧೬, ಸೋಮವಾರ.
ನಮ್ಮ ಮಠದ ಪರಮಾಪ್ತಭಕ್ತರಾದ ಶ್ರೀ ತೀತ ಮಲ್ಲಿಕಾರ್ಜುನರವರ ಜನ್ಮದಿನ.
ಅವರಿಗೆ ಈಗ ೮೨ ಮುಗಿದು ೮೩ ಶುರು. ಮಲ್ಲಿಕಾರ್ಜುನರವರು ತಮ್ಮ ಬಾಳಿನಲ್ಲಿ ಎಂಟು ದಶಕಗಳ ಪ್ರಯಾಣವನ್ನು ಪೂರೈಸಿದ್ದಾರೆ. ಇದೀಗ ವೃದ್ಧಾಪ್ಯ ಅವರನ್ನು ಹಂತ ಹಂತವಾಗಿ ಆವರಿಸಿಕೊಳ್ಳುತ್ತಿದೆ. ಈಗ ತೀತ ಮಲ್ಲಿಕಾರ್ಜುನರವರು ತಾತ ಮಲ್ಲಿಕಾರ್ಜುನರು!!
ತೀತ ಮಲ್ಲಿಕಾರ್ಜುನರವರು ಮಾರ್ಚ್ ೧೬ರ ಬೆಳಿಗ್ಗೆ ಬೆಳಿಗ್ಗೇನೇ ತಮ್ಮ ಧರ್ಮಪತ್ನಿ ಮತ್ತು “ಸಹಪದಿ” ಮಾತೃಶ್ರೀ ಸೌಭಾಗ್ಯಮ್ಮನವರೊಂದಿಗೆ ಹಿರೇಮಠಕ್ಕೆ ಬಂದು ಕರ್ತೃ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಯ ದರ್ಶನ ಪಡೆದು ನಮ್ಮ ಆಶೀರ್ವಾದವನ್ನು ಪಡೆದುಕೊಂಡರು.
“ದೇವರು ಅವರಿಗೆ ಸಶಕ್ತ ಆರೋಗ್ಯದೊಂದಿಗೆ ನೂರು ವರುಷದ ಆಯುಷ್ಯ ಕೊಡಲಿ” ಎಂದು ನಾವು ದೇವರಲ್ಲಿ ಪ್ರಾರ್ಥಿಸಿದೆವು ಮತ್ತು ಹಾಗೆಂದು ಹದುಳ ಹಾರೈಸಿದೆವು.
ಶ್ರೀ ತೀತ ಮಲ್ಲಿಕಾರ್ಜುನರವರು ಭಾರತ ದೇಶದ ಸ್ವಾತಂತ್ರö್ಯಪೂರ್ವಸಂಜಾತರು. ಅವರು ಹುಟ್ಟಿದ್ದು ಮಾರ್ಚ್ ೧೬, ೧೯೪೪. ಆಗ ಭಾರತ ಇನ್ನೂ ಗುಲಾಮಗಿರಿಯ ಸಂಕಷ್ಟದಲ್ಲಿತ್ತು. ಭಾರತದಲ್ಲಿ ಬಡತನ ಮನೆಮಾಡಿಕೊಂಡಿತ್ತು.
ಶ್ರೀ ಮಲ್ಲಿಕಾರ್ಜುನರವರು ಹುಟ್ಟುತ್ತಲೇ ಕಷ್ಟಜೀವಿಗಳು.
ಅವರು ಹುಟ್ಟು ಕಷ್ಟಜೀವಿಗಳು. ಮಲ್ಲಿಕಾರ್ಜುನರವರು ಹಸಿವೆಯನ್ನು ತುಂಬ ಹತ್ತಿರದಿಂದ ನೋಡಿ ಬೆಳೆದವರು. ಅವರಿಗೆ ಅನ್ನದ ಬೆಲೆ ತಿಳಿದಿತ್ತು.
ನಮ್ಮ ದೇಶವಿದು ಸ್ವಾತಂತ್ರö್ಯದ ನಂತರ ಸಮೃದ್ಧವಾಗಿರಲಿಲ್ಲ.
ಬ್ರಿಟಿಷರು ಈ ದೇಶವನ್ನು ಕೊಳ್ಳೆ ಹೊಡೆದಿದ್ದರು.
ಅದಕ್ಕಿಂತಲೂ ಹೆಚ್ಚಾಗಿ ಅವರು ಮಾಡಿದ ದರಿದ್ರದ ಕೆಲಸವೆಂದರೆ, ಹಿಂದೂ ಮುಸ್ಲೀಂ ಎಂದು ದೇಶವನ್ನು ಮತ್ತು ಹಿಂದೂ ಮುಸ್ಲೀಂ ಎಂದು ಮನಸ್ಸುಗಳನ್ನು ವಿಭಜಿಸಿದ್ದರು.
ಸ್ವತಂತ್ರ ಭಾರತದಲ್ಲಿ ಬಡತನ ತುಂಬಿ ತುಳುಕುತ್ತಿತ್ತು. ಅನ್ನಾಹಾರಗಳ ತೀವ್ರ ಕೊರತೆ ಇತ್ತು.
ಆಗಿನ ನಮ್ಮ ದೇಶದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಗಳವರಿಗೆ ದೇಶದ ಜನಕ್ಕೆ
“ಒಂದು ಹೊತ್ತು ಊಟಮಾಡಿ” ಎಂದು ಕರೆಕೊಡುವ ಅನಿವಾರ್ಯತೆ ಉಂಟಾಗಿತ್ತು.
ನಮ್ಮ ದೇಶದ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರಿಗೆ “ಗರೀಬಿ ಹಟಾವೋ” ಎಂದು ಹೇಳಬೇಕಾಗಿ ಬಂತು.
ಆಗ “ಗರೀಬೀ ಹಟಾವೋ”,
ಈಗ “ಗರೀಬೋಂ ಕೋ ಪಟಾವೋ” ಗ್ಯಾರಂಟಿರೂಪೇಣ!!
ಎಲ್ಲವೂ ಕಾಲ ಕಾಲಕ್ಕೆ ತಕ್ಕಂತೆ!! ಆದ್ದರಿಂದ “ಕಾಲಾಯ ತಸ್ಮೆೈ ನಮಃ”.
ಅದೇನೇ ಇರಲಿ. ಈಗ ಆ ಮಾತು ಬೇಡ.
ದೇಶವೇ ಬಡತನವನ್ನು ಅನುಭವಿಸುತ್ತಿರುವ ಕಾಲಘಟ್ಟದಲ್ಲಿ ಹುಟ್ಟಿದ ಮಲ್ಲಿಕಾರ್ಜುನರವರಿಗೆ ಸುಖದ ಸುಪ್ಪತ್ತಿಗೆಯ ಕನಸನ್ನು ಕೂಡ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಜೊತೆಯಲ್ಲಿ ಅವರದು ತುಂಬು ಕುಟುಂಬ. ಜೊತೆ ಜೊತೆಯಲ್ಲಿ ಹುಟ್ಟಿದವರು ಒಬ್ಬಿಬ್ಬರಲ್ಲ; ನಾಲ್ಕೆಂಟು ಜನ!! ಮಲ್ಲಿಕಾರ್ಜುನರವರ ಸುತ್ತಮುತ್ತ ಅಕ್ಕ ತಂಗಿಯರ ಮತ್ತು ಅಣ್ಣ, ತಮ್ಮಂದಿರ ಅಭಿಮನ್ಯುವ್ಯೂಹ.
ಮಲ್ಲಿಕಾರ್ಜುನರವರು ಹುಟ್ಟಿದ್ದು ಇವತ್ತಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಮಂಚೇನಹಳ್ಳಿಯ ಬಳಿಯಲ್ಲಿರುವ ವರವಣಿಯಲ್ಲಿ. ತುಂಬ ಚಿಕ್ಕ ಹಳ್ಳಿಯದು. ಓದು ಬರಹಕ್ಕೆ ಅಲ್ಲೇನಿದೆ? ಅದು ಕಾಶ್ಮೀರವಲ್ಲವಲ್ಲ!! ಅದು ಕುಗ್ರಾಮ. ಶಾರದೆ ಕಾಶ್ಮೀರಪುರವಾಸಿನಿ.
“ನಮಸ್ತೇ ಶಾರದಾದೇವೀ ಕಾಶ್ಮೀರಪುರವಾಸಿನೀ” ಅಲ್ಲವೆ?
ಹಾಗೂ ಹೀಗೂ ಮಲ್ಲಿಕಾರ್ಜುನರವರು ತುಂಬ ಕಷ್ಟಪಟ್ಟು ಅಲ್ಲೊಂದಷ್ಟು ಇಲ್ಲೊಂದಷ್ಟು ಓದುತ್ತಾರೆ. ಕೊನೆಯಲ್ಲಿ ಅವರಿವರ ಸಹಾಯ, ಸಹಕಾರ ಪಡೆದು ಅವರು ಸಿದ್ಧಗಂಗಾ ಮಠವನ್ನು ಸೇರಿಕೊಳ್ಳುತ್ತಾರೆ. ಮಲ್ಲಿಕಾರ್ಜುನರವರು ಸಿದ್ಧಗಂಗಾ ಮಠವನ್ನು ಸೇರಿಕೊಂಡ ನಂತರ ಅವರ ತಾರಾಬಲ ಮತ್ತು ಗ್ರಹಗತಿಯಲ್ಲಿ ತೀವ್ರ, ತೀವ್ರತರ ಬದಲಾವಣೆ ಆಗುತ್ತದೆ.
ಮಲ್ಲಿಕಾರ್ಜುನರವರು ಮಠದ ಪರಿಸರದಲ್ಲಿಯೇ ಬೆಳೆದು ದೊಡ್ಡವರಾಗುತ್ತಾರೆ.
ಓದು ಒಂದು ಹಂತಕ್ಕೆ ಬರುತ್ತಲೇ
ಅವರಿಗೆ “ಟೀಚರ್” ನೌಕರಿ ಸಿಕ್ಕುತ್ತದೆ.
ಮಲ್ಲಿಕಾರ್ಜುನರವರು ದೈಹಿಕ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ.
ಇತ್ತ ನೌಕರಿ ಸಿಕ್ಕುತ್ತಲೇ ಅತ್ತ ಸಾಂಸಾರಿಕ ಜವಾಬ್ದಾರಿಗಳು ಹೆಚ್ಚಿಕೊಳ್ಳುತ್ತವೆ.
ತಮ್ಮ, ತಂಗಿಯರನ್ನು ಗುರಿ ತಲುಪಿಸಬೇಕು.ತಂದೆ, ತಾಯಿಯ ಸ್ಥಾನದಲ್ಲಿ ನಿಂತು ಅವರುಗಳ ಬಾಳು, ಬದುಕಿಗೊಂದು ಪೀಠಿಕೆ, ಮುನ್ನುಡಿ ಬರೆಯಬೇಕು. ಆ ಎಲ್ಲಕ್ಕೂ ಮಲ್ಲಿಕಾರ್ಜುನರವರು “ಹೆಗಲು” ಕೊಡುತ್ತಾರೆ.
ಈ ಮಧ್ಯದಲ್ಲಿ
ಮಾತೃಶ್ರೀ ಸೌಭಾಗ್ಯಮ್ಮನವರು ಮಲ್ಲಿಕಾರ್ಜುನರವರ ಬಾಳಸಂಗಾತಿಯಾಗುತ್ತಾರೆ.
ಮಾತೃಶ್ರೀ ಸೌಭಾಗ್ಯರವರು ಕೂಡ ಶಿಕ್ಷಕ ವೃತ್ತಿಯಲ್ಲಿದ್ದವರು.
ಅವರು ಹಿಂದೀ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠಮಾಡುತ್ತಿದ್ದರು.
ತೀತದಲ್ಲಿಯೇ ಸೌಭಾಗ್ಯಮ್ಮನವರು ತಮ್ಮ ವೃತ್ತಿಜೀವನಕ್ಕೆ “ಅಥಶ್ರೀ” ಹೇಳುತ್ತಾರೆ.
“ಸೌಭಾಗ್ಯ” ಹೆಸರು ಸೌಭಾಗ್ಯಮ್ಮನವರಿಗೆ ಅನ್ವರ್ಥಕ.
ಅವರ ಹೆಸರಿನಂತೆಯೇ ಅವರ ಬದುಕು.
ತೀತ ಮಲ್ಲಿಕಾರ್ಜುನರವರು ಮತ್ತು ಮಾತೃಶ್ರೀ ಸೌಭಾಗ್ಯಮ್ಮನವರು ತೀತದಲ್ಲಿ ಬರೀ ವೃತ್ತಿಬಾಂಧವರಾಗಿ ಉಳಿಯದೆ ಅವರು ಸತಿ, ಪತಿಗಳಾಗಿ ತಮ್ಮ ಬಾಂಧವ್ಯಕ್ಕೆ ದಾಂಪತ್ಯದೀಕ್ಷೆಯನ್ನು ಕೊಟ್ಟುಕೊಳ್ಳುತ್ತಾರೆ. ಮದುವೆಯ ನಂತರ ಶ್ರೀ ಮಲ್ಲಿಕಾರ್ಜುನರವರ “ಹೆಗಲಭಾರ” ಇನ್ನೂ ಹೆಚ್ಚಿಕೊಳ್ಳುತ್ತದೆ.
ತಂಗಿಯರ ಮದುವೆ ಮಾಡಬೇಕು. ಅವರನ್ನು ಗಂಡನ ಮನೆ ಸೇರಿಸಬೇಕು.
ಅದನ್ನೆಲ್ಲ ಅವರು ತುಂಬ ಸಾಹಸಪಟ್ಟು ಮಾಡಿ ಮುಗಿಸುತ್ತಾರೆ.
ಸೌಭಾಗ್ಯಾರವರನ್ನು ಮದುವೆಯಾದ ನಂತರ ಮಲ್ಲಿಕಾರ್ಜುನರವರು ಚತುರ್ಭುಜರಾಗಿದ್ದರಿಂದ ಎಲ್ಲವೂ ಸಾಧ್ಯವಾಗುತ್ತದೆ ಮತ್ತು ಎಲ್ಲವೂ ಸಲೀಸಾಗಿ ಆಗಿಹೋಗುತ್ತದೆ.
ಶ್ರೀ ಮಲ್ಲಿಕಾರ್ಜುನರವರು ಸ್ವಭಾವತಃ ಕಷ್ಟಸಹಿಷ್ಣುಗಳು. ಅವರ ಜೊತೆಯಲ್ಲಿ “ನಡೆಗೆ ನಡೆ” ಮತ್ತು “ನುಡಿಗೆ ನುಡಿ” ಸೇರಿಸಿ ನಡೆಯುವ ಧರ್ಮಪತ್ನಿ ಸೌಭಾಗ್ಯರವರು ಇದ್ದುದರಿಂದ
ಮಲ್ಲಿಕಾರ್ಜುನರವರು ತಮ್ಮೆಲ್ಲ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸುವಲ್ಲಿ ಸಫಲರಾಗುತ್ತಾರೆ.
ಈ ಮಧ್ಯದಲ್ಲಿ ಮಲ್ಲಿಕಾರ್ಜುನ ಮತ್ತು ಸೌಭಾಗ್ಯ ದಂಪತಿಗಳಿಗೆ ಇಬ್ಬರು ಮಕ್ಕಳಾಗುತ್ತಾರೆ.
ಹಿರಿಯ ಮಗಳು ಭಾರತಿ. ಕಿರಿಯ ಮಗ ಕಿರಣ.
ಕಿರಣ ಹದಿನೈದು ಹದಿನಾರು ವರುಷದವನಿರುವಾಗ ಆಕಸ್ಮಿಕವೊಂದರಲ್ಲಿ ಅಸು ನೀಗಿ ಶಿವನನ್ನು ಸೇರುತ್ತಾನೆ. ಪುತ್ರಶೋಕದಿಂದ ಚೇತರಿಸಿಕೊಳ್ಳುವುದು ದಂಪತಿಗಳಿಬ್ಬರಿಗೂ ತುಂಬ ಕಷ್ಟವಾಗುತ್ತದೆ.
ಈ ಪ್ರಪಂಚದಲ್ಲಿ ಪುತ್ರಶೋಕದಂಥ ಶೋಕ ಇನ್ನೊಂದಿಲ್ಲ. ಅದು ಎಂಥ ಕಲ್ಲುಹೃದಯದವರನ್ನು ಕೂಡ ಮೆತ್ತಗೆ ಮಾಡಿಹಾಕುತ್ತದೆ.
ದಂಪತಿಗಳಿಬ್ಬರೂ ಮಗಳು ಭಾರತಿಯನ್ನು ಚೆನ್ನಾಗಿ ಓದಿಸುತ್ತಾರೆ.
ಭಾರತಿಯವರು ಓದಿ ಸರಕಾರಿ ಕಚೇರಿಯಲ್ಲಿ ಕೆಲಸನಿರ್ವಾಹಕರಾಗುತ್ತಾರೆ. ದಂಪತಿಗಳು ಯೋಗ್ಯವರನೊಂದಿಗೆ ಮಗಳ ಮದುವೆ ಮಾಡುತ್ತಾರೆ.
ಮಲ್ಲಿಕಾರ್ಜುನರವರ ಅಳಿಯ ಕೆ. ಎನ್. ಶಶಿಧರ ಆಡಿಟರ್.
ಕೆ. ಎನ್. ಶಶಿಧರ ವೃತ್ತಿಯಲ್ಲಿ ತುಂಬ ಹೆಸರುಮಾಡಿದ್ದಾರೆ.
ಅಷ್ಟು ಮಾತ್ರವಲ್ಲ, ಅವರೇ ಸಹಕಾರಿ ಬ್ಯಾಂಕ್‌ವೊಂದನ್ನು ಸ್ಥಾಪಿಸಿ ಹಲವಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಅವರು ಸ್ಕೂಲು, ಕಾಲೇಜುಗಳ ನಿರ್ವಹಣೆಯಲ್ಲೂ ಸಹ ತಮ್ಮ ಆಸಕ್ತಿಯನ್ನು ದಾಖಲಿಸಿಕೊಂಡಿದ್ದಾರೆ.
ಮೊಮ್ಮಗಳು ಅನ್ನಪೂರ್ಣಾ ತುಂಬ ಚುರುಕುಮತಿ.
ಆಕೆ ಕೂಡ ನ್ಯಾಚರೋಪತಿಯಲ್ಲಿ ಉನ್ನತ ವ್ಯಾಸಂಗಮಾಡಿ ಈಗ ಉದ್ಯಮ ಹಾಗೂ ಉದ್ಯೋಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ.
ಅನ್ನಪೂರ್ಣಾ ಕವಿ ಕೂಡ ಅಹುದು. ಅವಳದು ಕವಿಮನಸ್ಸು.
“ಮೋಕ್ಷ” ಅವಳ ಕಾವ್ಯನಾಮ.
ಅವಳ ಕೆಲವು ಕೃತಿಗಳು ಪ್ರಕಟಣಾಭಾಗ್ಯವನ್ನು ಪಡೆದುಕೊಂಡಿವೆ.
ಈಗಾಗಲೇ ಮತ್ತು ಈ ಚಿಕ್ಕ ವಯಸ್ಸಿನಲ್ಲಿಯೇ ಮೋಕ್ಷ ಸಾಹಿತ್ಯಲೋಕಕ್ಕೆ ತನ್ನನ್ನು ತಾನು ಪರಿಚಯಸಿಕೊಂಡಿದ್ದಾಳೆ. ಅವಳು ಅಧ್ಯಯನ, ಆಸಕ್ತಿ ಹಾಗೂ ಅಭಿರುಚಿ, ಈ ಮೂರನ್ನೂ ತನ್ನ ಜೊತೆ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಳೆ.
ಶ್ರೀ ತೀತ ಮಲ್ಲಿಕಾರ್ಜುನರವರು ವೃತ್ತಿಯಿಂದ ನಿವೃತ್ತರಾಗುತ್ತಲೇ
ನಮ್ಮ ಮಠದ ಮುಖ್ಯವಾಹಿನಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು.
ವೃತ್ತಿಯ ನಂತರ ಹಿರೇಮಠ ಅವರ ಮೊದಲ ಆದ್ಯತೆಯಾಯಿತು.
ಮುಂದಿನ ದಿನಗಳಲ್ಲಿ ಅವರು
“ಮಠ ಮೊದಲು, ಮನೆ ನಂತರ” ಎಂಬ ಸಿದ್ಧಾಂತವನ್ನು ತಮ್ಮದಾಗಿಸಿಕೊಂಡರು.
ನಾವು ತುಮಕೂರಿಗೆ ಬಂದಾಗಿನಿಂದ ನಿರಂತರವಾಗಿ ಅವರು ಹಿರೇಮಠದ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಶ್ರೀಮಠದ ಅವರ ಸೇವೆಗೆ ಈಗ ಬೆಳ್ಳಿಹಬ್ಬದ ಸಂಭ್ರಮ!!
ಹಿರೇಮಠದಲ್ಲಿ ಮಲ್ಲಿಕಾರ್ಜುನರವರದು ನಿಷ್ಕಾಮಸೇವೆ.
ಅವರು ಮಠದ ದುಡ್ಡು, ಕಾಸಿಗೆ ಆಸೆಪಟ್ಟವರಲ್ಲ. ಅವರು ಇದು “ದುಡ್ಡಿಲ್ಲದ ಸೇವೆ” ಎಂದು ಒಂದು ದಿನವೂ ಬೇಸರಿಸಿಕೊಳ್ಳಲಿಲ್ಲ. ಮಠದಿಂದ ಅವರು ಏನಾದರೂ ಪಡೆಯುವುದಿರಲಿ, ಅವರೇ ಮಠಕ್ಕೆ ಕೊಟ್ಟಿದ್ದಾರೆ. ಬರೀ ಅಷ್ಟಿಷ್ಟಲ್ಲ, ಸಾಕಷ್ಟು ಕೊಟ್ಟಿದ್ದಾರೆ. ಮಠದ ಅಭಿವೃದ್ಧಿಗೆ ಮತ್ತು ತಪೋವನದ ನಮ್ಮ ಕನಸಿಗೆ ಅವರು ಕೈಬಿಚ್ಚಿ ಕೊಟ್ಟಿದ್ದಾರೆ.
ಹಿರೇಮಠ ಮತ್ತು ತಪೋವನದ ಸರ್ವಾಂಗಸುಂದರ ಅಭಿವೃದ್ಧಿಗಾಗಿ ಲಕ್ಷ ಲಕ್ಷಗಳನ್ನು ಕೊಟ್ಟು “ಹಿರೇಮಠಾರ್ಪಣಮಸ್ತು” ಮತ್ತು “ತಪೋವನಾರ್ಪಣಮಸ್ತು” ಹೇಳಿದ್ದಾರೆ.
ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನಸ್ವಾಮಿಯ
ಇವತ್ತಿನ ಈ ರೂಪ, ಗಾತ್ರ ಮತ್ತು ಆಕಾರದ ಹಿಂದೆ ಇರುವ ಸಂಕಲ್ಪ ಅವರದು.
ಇದು ನಮಗಷ್ಟೇ ಅಲ್ಲ, ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನಸ್ವಾಮಿಗೂ ಗೊತ್ತು!!
ಸರಿಸುಮಾರು ೨೫ವರುಷಗಳಿಂದ ಮಲ್ಲಿಕಾರ್ಜುನರವರು ಹಿರೇಮಠದ “ಉಸ್ತುವಾರಿ” ಮತ್ತು ಜವಾಬ್ದಾರಿಗೆ ಹೆಗಲುಕೊಟ್ಟುಕೊಂಡಿದ್ದಾರೆ.
ಶ್ರೀ ತೀತ ಮಲ್ಲಿಕಾರ್ಜುನರವರು ಮತ್ತು ಶ್ರೀ ಕೆ. ಆರ್. ಜಗನ್ನಾಥರವರು – ಈ ಇಬ್ಬರೂ ಅಂದಿನಿಂದ ಇಂದಿನವರೆಗೆ ಜಯ, ವಿಜಯರ ಹಾಗೆ ನಮ್ಮ ಅಕ್ಕಪಕ್ಕದಲ್ಲಿ ನಿಂತುಕೊಂಡಿದ್ದಾರೆ. ಇಬ್ಬರೂ ಸಹ ನಮ್ಮ ಜೊತೆ ಜೊತೆಯಲ್ಲಿ ಹಿರೇಮಠಕ್ಕೆ “`ಧರ್ಮೇ ಚ ಅರ್ಥೇ ಚ ಮೋಕ್ಷೇ ಚ ನಾತಿಚರಾಮಿ ನಾತಿಚರಾಮಿ ನಾತಿಚರಾಮಿ” ಎಂದು ಹೇಳಿಕೊಂಡಿದ್ದಾರೆ.
ಶ್ರೀ ಮಲ್ಲಿಕಾರ್ಜುನರವÀರದು ತುಂಬ ಮೃದುಸ್ವಭಾವ.
ಅವರು ಯಾವತ್ತೂ ನಯ-ವಿನಯದ ಸೀಮೋಲ್ಲಂಘನ ಮಾಡಿದವರಲ್ಲ.
ನಾವು ಕಂಡ ಹಾಗೆ, ಅವರು ಯಾರನ್ನೂ ಗದರಿ ಮಾತನಾಡಿದವರಲ್ಲ.
ಹಿರಿಯರೇ ಇರಲಿ, ಕಿರಿಯರೇ ಇರಲಿ, ಎಲ್ಲರನ್ನೂ ಅವರು ತುಂಬ ಪ್ರೀತಿಯಿಂದ ಮತ್ತು ವಾತ್ಸಲ್ಯದಿಂದ ಮಾತನಾಡಿಸುತ್ತಾರೆ. “ಅಯ್ಯಾ ಎಂದರೆ ಸ್ವರ್ಗ”, “ಎಲವೋ ಎಂದರೆ ನರಕ” ಎಂಬುವುದು ಅವರಿಗೆ ಚೆನ್ನಾಗಿ ಗೊತ್ತು.
ಮಠದಿಂದ ಏನಾದರೂ ಮಾಹಿತಿ ಬೇಕಾದಾಗ ಯಾರಾದರೂ ಹೆಣ್ಣುಮಕ್ಕಳು ಮಠಕ್ಕೆ ಫೋನು ಮಾಡಿದರೆ “ಹೇಳಿಯಮ್ಮ, ಹೇಳಿ ತಾಯಿ” ಎಂದೇ ಮಲ್ಲಿಕಾರ್ಜುನರವರು ಅವರೊಂದಿಗೆ ಮಾತನಾಡುವುದು!!
ಅವರು ಹಾಗೆ ದೂರವಾಣಿಯಲ್ಲಿ ಮಾತನಾಡುವುದನ್ನು ನಾವು ದೂರದಿಂದಲೇ ಗಮನಿಸಿದ್ದೇವೆ.
ಸವಣ್ಣನವರು ಹೇಳಿದ ಹಾಗೆ,
ನಮ್ಮ ಮಲ್ಲಿಕಾರ್ಜುನರವರಿಗೆ ಮೃದುವಚನಗಳೇ ಅವರ ಜಪ ಮತ್ತು ತಪ!!
ಈ ಕಾಲದಲ್ಲಿ
“ಕಂಡ ಭಕ್ತರಿಗೆ ಕೈ ಮುಗಿಯುವಾತನೇ ಭಕ್ತ
ಮೃದುವಚನವೇ ಸಕಲ ಜಪಂಗಳಯ್ಯ
ಮೃದುವಚನವೇ ಸಕಲ ತಪಂಗಳಯ್ಯ
ಸದುವಿನಯವೇ ಸದಾಶಿವನ ಒಲುಮೆಯಯ್ಯಾ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ!!” ಎಂಬ ಬಸವಣ್ಣನವರ ಈ ಮಾತಿಗೆ ಅದೆಷ್ಟು ಜನ ಕಿವಿಕೊಟ್ಟುಕೊಂಡಿದ್ದಾರೆ?
ಅವರಿವರು ಮತ್ತು ಜನಸಾಮಾನ್ಯರು ಬಿಡಿ,
ಇತ್ತೀಚಿನ ದಿನಗಳಲ್ಲಿ ಕಾವಿಧಾರಿಗಳ ಮಾತುಗಳು ಕೂಡ ದಾರಿತಪ್ಪಿವೆ.
ಕಾಷಾಯಾಂಬರಧಾರಿಗಳು ಕೂಡ ತಮ್ಮ ಮನದೊಳಗಣ ಕಹಿ, ಕಷಾಯಗಳನ್ನು ಎಗ್ಗಿಲ್ಲದ ಹಾಗೆ ಹೊರಗೆ ಉಗಿಯುತ್ತಲಿದ್ದಾರೆ.
ಖುದ್ದು ನ್ಯಾಯಾಲಯಗಳೇ ಮುಂದೆ ಬಂದು,
“ಉಡುಗೆ-ತೊಡುಗೆಗೆ ತಕ್ಕಂತೆ ಭಾಷೆ ಇರಲಿ” ಎಂದು ಬುದ್ಧಿಹೇಳಬೇಕಾಗಿ ಬಂದಿದೆ.
ಅಷ್ಟೆಲ್ಲ ಪರಿಸ್ಥಿತಿ ಅಧ್ವಾನ ಎದ್ದುಹೋಗಿದೆ.
ಮಲ್ಲಿಕಾರ್ಜುನರವರಿಗೆ ಭಕ್ತರಿಗೆ ನಾವು ಏನನ್ನೂ ಬೇಡುವುದಿಲ್ಲ ಎಂಬ ವಿಷಯ ಚೆನ್ನಾಗಿ ಗೊತ್ತು. “ಬೇಡುವಾತ ಜಂಗಮನಲ್ಲ; ಬೇಡಿಸಿಕೊಂಬಾತ ಭಕ್ತನಲ್ಲ” ಎಂಬ ಸಿದ್ಧಾಂತದ ವಿಷಯದಲ್ಲಿ ನಮಗಿರುವ ಬದ್ಧತೆಗೆ ಅವರು ಚಿರಪರಿಚಿತರು.
ನಮ್ಮ ಸಂಕೋಚವನ್ನು ಅವರು ಅರ್ಥಮಾಡಿಕೊಂಡಿದ್ದಾರೆ.
ನಮ್ಮ ಸಂಕೋಚವದು ಜಗದಗಲ, ಮುಗಿಲಗಲ, ಮಿಗೆಯಗಲವೆಂಬುವುದು ನಮ್ಮನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತುಂಟು.
ಯಾರಾದರೂ ಭಕ್ತರು ಸ್ವತಃ ತಾವಾಗಿಯೇ ಮುಂದೆ ಬಂದು
“ಮಠಕ್ಕೆ ಏನಾದರೂ ಬೇಕಾ? ಮಠಕ್ಕೆ ಏನಾದರೂ ಅವಶ್ಯಕತೆ ಇದೆಯಾ?”
ಎಂದು ಕೇಳಿದಾಗ ಮಲ್ಲಿಕಾರ್ಜುನರವರು ಅವರಿಗೆ ಮಠದ ಅಗತ್ಯ, ಅವಶ್ಯಕತೆಗಳ ಕುರಿತು ಹೇಳಿಬಿಟ್ಟು ಮಠಕ್ಕೆ ಬೇಕಾದ ಸಹಾಯ, ಸಹಕಾರಗಳನ್ನು ಪಡೆಯುತ್ತಿದ್ದರು. ಮಠದ ಲೌಕಿಕ ಪದ, ಪದಾರ್ಥ, ಪರಿಕರಗಳನ್ನು ಹೆಚ್ಚಿಸುವಲ್ಲಿ ತೀತ ಮಲ್ಲಿಕಾರ್ಜುನರವರು ಮತ್ತು ಜಗನ್ನಾಥರವರು, ಇಬ್ಬರೂ ಸಹ ಅಹಂಭೂಮಿಕೆಯನ್ನು ವಹಿಸಿದ್ದಾರೆ.
ಹಿರೇಮಠವು ಸ್ವಾಭಿಮಾನಿಯಾಗಿ ಮತ್ತು ಸ್ವಾವಲಂಬಿಯಾಗಿ
ನಿಂತುಕೊಳ್ಳುವ ಹಾಗೆ ಮಾಡುವಲ್ಲಿ ತೀತ ಮಲ್ಲಿಕಾರ್ಜುನ ಮತ್ತು ಶ್ರೀ ಜಗನ್ನಾಥರವರ ಎರಡು ದಶಕಗಳ ನಿಸ್ವಾರ್ಥ ಮತ್ತು ನಿಷ್ಕಾಮ ಸೇವೆಯ ಕಾರಣ ಎಂದು ಮುಕ್ತ-ಮುಕ್ತವಾಗಿ ಹೇಳಬಹುದು. ಅವರ ಸೇವೆಯದು ಗಮನಾರ್ಹ; ಮತ್ತದು ಅಭಿನಂದನೀಯ.
ಮಠದಿಂದ ಜರಗುವ ತೀರ್ಥಯಾತ್ರೆ, ಕ್ಷೇತ್ರಯಾತ್ರೆ, ಕಾಶೀಯಾತ್ರೆ ಮತ್ತು ಬೇರೆ ಬೇರೆ ಕಾರ್ಯಕ್ರಮಗಳನ್ನು ಸಂಯೋಜಿಸುವಲ್ಲಿ ಮಲ್ಲಿಕಾರ್ಜುನರವರು ಪ್ರಧಾನ ಪಾತ್ರವಹಿಸಿದ್ದಾರೆ.
ಮಠದ ಸೇವೆಯನ್ನು ಮಾಡುವಾಗ ಅವರಿಗೆ “ಅಂಥದ್ದು ಇಂಥದ್ದು” ಎಂದೇನಿಲ್ಲ;
ಸಮಯ, ಸಂದರ್ಭಗಳಿಗೆ ತಕ್ಕ ಹಾಗೆ ಅವರು ಎಲ್ಲ ತೆರನಾದ ಸೇವೆಯನ್ನೂ ಮಾಡಿದ್ದಾರೆ. ಮಠದ ಪ್ರಾಂಗಣವನ್ನು ಗುಡಿಸುವುದರಿಂದ ಮೊದಲು ಮಾಡಿಕೊಂಡು ಬಂದ ಭಕ್ತರಿಗೆ ಊಟವನ್ನು ಬಡಿಸುವವರೆಗೆ!
ಸೇವೆ ಎಂದರೆ ಸೇವೆ. ಸೇವೆಯಲ್ಲಿ ತರತಮಗಳೇನು ಬಂತು?
ಮಲ್ಲಿಕಾರ್ಜುನರವರ ಪ್ರಾಂಜಲ ಮತ್ತು ಪ್ರಾಮಾಣಿಕ ಸೇವೆಗೆ ನಾವು ಮಾತ್ರöವಲ್ಲ,
ಹಿರೇಮಠದ ಕರ್ತೃಸನ್ನಿಧಾನ ಶ್ರೀ ಮಲ್ಲಿಕಾರ್ಜುನಸ್ವಾಮಿಯೂ ಸಹ ಕಣ್ಣಾಗಿದ್ದಾನೆ.
ಮಲ್ಲಿಕಾರ್ಜುನರವರಿಗೆ ನಮ್ಮ ಮೇಲಂತೂ ಅಪಾರ ಭಕ್ತಿ ಮತ್ತು ಪ್ರೀತಿ.
ಅವರಿಗೆ ನಿಂತರೂ ನಮ್ಮದೇ ಧ್ಯಾನ, ಕುಳಿತರೂ ನಮ್ಮದೇ ಧ್ಯಾನ.
ನಿರಂತರ ಅವರಿಗೆ ನಮ್ಮದೇ ಧ್ಯಾನ.
ಮೇಲಿಂದ ಮೇಲೆ ನಾವು ಅವರ ಕನಸಲ್ಲಿ ಬರುತ್ತೇವಂತೆ!!
ಮಲ್ಲಿಕಾರ್ಜುನರವರ ಪೂಜೆಯ ಮನೆಯಲ್ಲೂ ನಾವಿದ್ದೇವೆ.
ಅವರ ಪವಿತ್ರವಾದ ಮನಸ್ಸಿನಲ್ಲೂ ನಾವಿದ್ದೇವೆ.
ಅವರ ದಿನ ಶುರುವಾಗುವುದು ನಮ್ಮ ನೆನಹಿನಿಂದ.
ಅವರ ದಿನ ಮುಗಿಯುವುದು ನಮ್ಮ ನೆನಹಿನಿಂದ.
ಅವರು ನಮ್ಮನ್ನು ತಮ್ಮಲ್ಲಿ ಓತಪ್ರೋತಗೊಳಿಸಿಕೊಂಡಿದ್ದಾರೆ.
ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಆಚಾರ್ಯ ರೇಣುಕರು ಹೇಳುತ್ತಾರೆ,
“ಅಪ್ರತ್ಯಕ್ಷೋ ಮಹಾದೇವಃ ಗುರುರೂಪೇಣ ಪ್ರತ್ಯಕ್ಷಃ” ಎಂದು.
ನಾವು ಮಲ್ಲಿಕಾರ್ಜುನರವರ ದೃಷ್ಟಿಯಲ್ಲಿ,
ಅಪ್ರತ್ಯಕ್ಷ ಮಹಾದೇವನ ಪ್ರತ್ಯಕ್ಷ ಗುರುರೂಪ!!
ಆದ್ದರಿಂದಲೇ ನಮ್ಮ ಋಷಿಮುನಿಗಳು “ಯದ್ಭಾವಂ ತದ್ಭವತಿ” ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನರವರು ಈಗ ೮೨ನ್ನು ಪೂರೈಸಿ ೮೩ರ ಗಡಿಯನ್ನು ಪ್ರವೇಶಿಸಿದ್ದಾರೆ.
ವಯೋಮಾನಕ್ಕೆ ಅನುಗುಣವಾಗಿ ಅವರೀಗ ಒಂದಷ್ಟು ಜರ್ಜರಿತರಾಗಿದ್ದಾರೆ. ಎಲ್ಲೂ ಸಲ್ಲದ ನೋವು, ನಿಟ್ಟುಸಿರುಗಳು ವೃದ್ಧಾಪ್ಯದಲ್ಲಿ ವೃದ್ಧದೇಹದಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ.
ಮಲ್ಲಿಕಾರ್ಜುನರವರಿಗೆ ಮೊದಲಿನ ಹಾಗೆ ಈಗ ಮಠಕ್ಕೆ ಬರಲಾಗುತ್ತಿಲ್ಲ.
ಅವರ ಮನೆ ಬಟವಾಡಿಯಲ್ಲಿ; ನಮ್ಮ ಮಠ ಚಿಕ್ಕಪೇಟೆಯಲ್ಲಿ.
ಒಂದು ಉತ್ತರಧ್ರುವ. ಇನ್ನೊಂದು ದಕ್ಷಿಣಧ್ರುವ.
ಒಂದು ಕಾಶ್ಮೀರದ ಆ ತುದಿ. ಇನ್ನೊಂದು ಕನ್ಯಾಕುಮಾರಿಯ ತುದಿ.
ಮಲ್ಲಿಕಾರ್ಜುನರವರ ದೇಹ ಮನೆಯಲ್ಲಿದ್ದರೂ ಅವರ ಮನಸ್ಸು ಮಾತ್ರ ಮಠದಲ್ಲಿಯೇ!!
ಮಠಕ್ಕಾಗಿ ಮತ್ತು ಮಠದ ಏಳಿಗೆಗಾಗಿ ಅವರ ಮನಸ್ಸು ಅನುಕ್ಷಣ ಮತ್ತು ಅನುದಿನ ತುಡಿಯುತ್ತಿರುತ್ತದೆ, ಮತ್ತದು ಮಿಡಿಯುತ್ತಿರುತ್ತದೆ.
ಮೊದಲಿನ ಹಾಗೆ
ಮಠದ ಸೇವೆ ಮಾಡಲಿಕ್ಕೆ ಆಗುತ್ತಿಲ್ಲವೆಂದು ಅವರು ನೊಂದುಕೊಳ್ಳುತ್ತಿರುತ್ತಾರೆ.
ವಯೋಧರ್ಮದ ಮುಂದೆ ಮನೋಧರ್ಮದ ಆಟ ನಡೆಯುವುದಿಲ್ಲ.
ಮಾತೃಶ್ರೀ ಶ್ರೀಮತಿ ಸೌಭಾಗ್ಯರವರು ಈ ವಯಸ್ಸಿನಲ್ಲಿ ಮಲ್ಲಿಕಾರ್ಜುನರವರನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆ ಮೊದಲಿನಿಂದಲೂ ಸೌಭಾಗ್ಯಮ್ಮನವರು ಪತಿಯ ಪ್ರತಿಯೊಂದು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ನೆರವಾಗುತ್ತ ಬಂದಿದ್ದಾರೆ. ಅವರು ತಮ್ಮ ಯಜಮಾನರ ಇಚ್ಛೆಗೆ ವಿರುದ್ಧ ನಡೆದವರಲ್ಲ.
ಶ್ರೀ ಮಲ್ಲಿಕಾರ್ಜುನ ಮತ್ತು ಸೌಭಾಗ್ಯಾರವರ ಅನ್ಯೋನ್ಯತೆಯದು ಅಬಾಧಿತ.
ಅವರ ದಾಂಪತ್ಯವದು ಇವತ್ತಿನ ಜನರಿಗೆ ಮಾರ್ಗದರ್ಶಿ ಮತ್ತು ಮಾರ್ಗಸೂಚಿ.
ಮಲ್ಲಿಕಾರ್ಜುನರವರು, ಯಾವತ್ತೂ “ತಾವಾಯಿತು, ತಮ್ಮ ಹೆಂಡತಿ, ಮಕ್ಕಳಾಯಿತು” ಎಂದು ತಮ್ಮ ಮನೋ ಬುದ್ಧಿಗಳಿಗೆ ಬೇಲಿ ಹಾಕಿಕೊಂಡು ಕುಳಿತವರಲ್ಲ. ಅವರು ಯಾವುದೇ ಕಾರಣಕ್ಕೂ “ಪರಚಿಂತೆ ನಮಗೇಕಯ್ಯಾ, ನಮ್ಮ ಚಿಂತೆ ನಮಗೆ ಸಾಲದೆ” ಎಂದು ಸುಮ್ಮನೇ ಕೈಕಟ್ಟಿಕೊಂಡು ಕುಳಿತುಕೊಂಡವರಲ್ಲ,
“ಯಥಾಶಕ್ತಿ ಅವರಿವರಿಗೆ ಸಹಾಯ ಮಾಡೋಣ” ಎಂಬುವುದು ಅವರ ಮನೋಭಾವ.
“ಇನ್ನಷ್ಟು ದಿನಕ್ಕಾಗಿ ಇನ್ನೆಷ್ಟು ಬೇಕು?” ಎಂಬ ಫಿಲಾಸಫಿ ಅವರದು.
ಇದು ಕಾರಣ, ಅವರು ತಮ್ಮನ್ನು ತಾವು ಧಾರಾಳವಾಗಿ ದಾನ, ಧರ್ಮ, ದಾಸೋಹಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರೀಗ ತಮ್ಮ ವೈಯಕ್ತಿಕಕ್ಕೆ ವಿರಾಮವಿತ್ತು ಸಾರ್ವತ್ರಿಕಕ್ಕೆ ಆದ್ಯತೆ ಕೊಟ್ಟುಕೊಂಡಿದ್ದಾರೆ.
ಇವತ್ತಿನ ದಿನ ನಾವು ಹಿರೇಮಠದಲ್ಲಿ ಮಲ್ಲಿಕಾರ್ಜುನ ಮತ್ತು ಸೌಭಾಗ್ಯಮ್ಮ ದಂಪತಿಗಳನ್ನು ಭಕ್ತಜನಗಳ ಸಮ್ಮುಖದಲ್ಲಿ ಅಭಿನಂದಿಸಿ ಆಶೀರ್ವದಿಸುತ್ತಿದ್ದೇವೆ.
ಆ ದೇವರು, ನಮ್ಮ ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನಸ್ವಾಮಿಯು ಅವರಿಗೆ ಉತ್ತಮ ಆರೋಗ್ಯದೊಂದಿಗೆ ಯಥೇಚ್ಛ ಆಯುಷ್ಯವನ್ನು ಅನುಗ್ರಹಿಸಲಿ.
ಒಟ್ಟಿನಲ್ಲಿ ಅವರು ಯಾವಾಗಲೂ ಲವಲವಿಕೆ ಹಾಗೂ ಉತ್ಸಾಹದಿಂದ ಇರಬೇಕು.
ಹಾಗೆ ದೇವರು ಅವರನ್ನು ಆಶೀರ್ವದಿಸಬೇಕು.
ಅವರ ಸಶಕ್ತ ಆಯುರಾರೋಗ್ಯಕ್ಕಾಗಿ ನಾವು ಪ್ರತಿನಿತ್ಯ
ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿರುತ್ತೇವೆ ಎಂದು ಹೇಳುತ್ತ ಶ್ರೀ ಮಲ್ಲಿಕಾರ್ಜುನ ದಂಪತಿಗಳಿಗೆ
ಮತ್ತು ವಿಶೇಷವಾಗಿ ಶ್ರೀ ಮಲ್ಲಿಕಾರ್ಜುನರವರಿಗೆ ನಾವು ಅವರ ೮೩ನೇ ಜನ್ಮವರ್ಧಂತಿಯ ಶುಭಸಂದರ್ಭದಲ್ಲಿ ಹತ್ಪೂರ್ವಕವಾಗಿ ಶುಭಾಶೀರ್ವಾದಗಳನ್ನು ತಿಳಿಸುತ್ತಿದ್ದೇವೆ.
|| ಶಿವಂ ಭೂಯಾತ್ || – ಇತ್ಯಾಶಿಷಃ
ಡಾ. ಶಿವಾನಂದ ಶಿವಾಚಾರ್ಯ ಶ್ರೀಗಳು
ಸುಕ್ಷೇತ್ರ ಹಿರೇಮಠ, ತಪೋವನ, ತುಮಕೂರು
